ಐ ಟಿ ಗ್ರಹದ ಜೀವಿಗಳು
ನಾನೀಗ ನಿಮಗೆ ಹೇಳಲಿರುವ ವಿಷಯ ಸುಮಾರು 25 ವರ್ಷಗಳ ಹಿಂದೆ ನಡೆದಿದ್ದರೂ, ನಿನ್ನೆ ಮೊನ್ನೆ ನಡೆದಂತೆ ನನ್ನ ಮನಸಿನಲ್ಲಿ ಹಚ್ಚ ಹಸುರಾಗಿದೆ. ಸುಮಾರು ಮುಸ್ಸಂಜೆಯ ಹೊತ್ತು, ಪ್ರಶಾಂತ ಹಾಗೂ ನಾನು ಕಾರ್ಕಳದ ಗೋಮಟೇಶ್ವರ ಬೆಟ್ಟಕ್ಕೆ ತಿರುಗಾಟಕ್ಕೆ ಹೋಗಿದ್ದೆವು. ಬೆಟ್ಟದ ಮೇಲೆ ತಿನ್ನಲು ಕಡಲೆ ತರಲೆಂದು ಪ್ರಶಾಂತ ಕೆಳಗೆ ಹೋಗಿದ್ದ. ನಾನು ಗೋಮಟೇಶ್ವರ ಬೆಟ್ಟದ ನೆತ್ತಿಯ ಮೇಲೆ ಮುಂದೆ ನಡೆಯದಬಹುದಾದ ಅದ್ಭುತದ ಬಗ್ಗೆ ಎಳ್ಳಷ್ಟೂ ಸುಳಿವು ಇಲ್ಲದೆ, ಆ ಅಗಾಧ ಮೂರ್ತಿಯ ಹಿಂದೆ ಮಂಗಳಪಾದೆಯನ್ನು ನೋಡುತ್ತಾ ನಿಂತಿದ್ದೆ. ಆಶ್ಚರ್ಯ! ಆ ನೀಲ ಆಕಾಶದಲ್ಲಿ ದೂರದಿಂದ ಬೆಳ್ಳಿ ಚುಕ್ಕೆಯೊಂದು ನನ್ನ ಕಡೆಗೆ ಬರತೊಡಗಿತು. ಚುಕ್ಕೆಯಂತೆ ಭಾಸವಾಗುತ್ತಿದ್ದ ಅದು ಹತ್ತಿರ ಬಂದಂತೆಲ್ಲಾ ತಟ್ಟೆಯಾಕಾರದ ತಳೆದು ತನ್ನ ಕಡ್ಡಿಯಂತಹ ನಾಲ್ಕು ಕಾಲಿನ ಮೇಲೆ ಗೋಮಟೇಶ್ವರ ವಿಗ್ರಹದ ಹಿಂದೆ ವಿಶಾಲವಾದ ಖಾಲಿ ಜಾಗದಲ್ಲಿ ನಿಲುಗಡೆಯಾಯ್ತು. ಭ್ರಮೆಯೋ ಏನೋ ಎಂದುಕೊಳ್ಳುತ್ತಾ ನೋಡ ನೋಡುತ್ತಿದ್ದಂತೆ ಆ ತಟ್ಟೆಯಾಕಾರದ ವಾಹನದಿಂದ 8 -10 ಜನ ಮಾನವನಂತೆಯೇ ಕಾಣುತ್ತಿದ್ದ ಜೀವಿಗಳು ಹೊರಗಿಳಿಯತೊಡಗಿದವು. ಮಾಲೆಯಂತೆ ಧರಿಸಿದ್ದ ಗುರುತು ಚೀಟಿಯಿಂದ ಅವರೆಲ್ಲರ ಕೊರಳು ಅಲಂಕರಿಸಲ್ಪಟ್ತಿತ್ತು. ಇದನ್ನೆಲ್ಲ ನೋಡುತ್ತಾ ಆಶ್ಚರ್ಯದಿಂದ ನಿಂತಿದ್ದೆ.ಅವುಗಳಲ್ಲೊಂದು ಜೀವಿ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರವಾಗಲೋ ಎಂಬಂತೆ ನಾನಿದ್ದ ಕಡೆ ನಿಧಾನವಾಗಿ ನಡೆಯುತ್ತಾ ಬಂದಿತು.ಅವರ ಬಗ್ಗೆ ತಿಳಿಯುವ ಕುತೂಹಲದಿಂದ ಅದನ್ನು ಮಾತನಾಡಿಸುವ ನಿರ್ಧಾರ ಮಾಡಿದೆ.
ನನ್ನ ಭಾಷೆ ಅದಕ್ಕೆ ತಿಳಿಯುತ್ತೋ ಇಲ್ಲವೋ ಎಂಬ ಸಂಶಯದಲ್ಲಿ ಮಾತನಾಡಲು ತಡವರಿಸುತ್ತಿದ್ದೆ. ಅಷ್ಟರಲ್ಲಿ ಅದು ತನ್ನಲ್ಲಿದ್ದ ಮಣೆಯಂತಹ ವಸ್ತುವನ್ನು ತೆರೆದು ಅದರಲ್ಲಿದ್ದ ಗುಂಡಿಯನ್ನು ಒತ್ತತೊಡಗಿತು. ಸ್ವಲ್ಪ ಸಮಯದ ನಂತರ ಅದೇ ಹೇಳಿದಂತೆ ಅದೇನೋ ಇಂಟರ್ಪ್ರಿಟರ್ ತನ್ನ ಕಾರ್ಯರಾಂಭ ಮಾಡಿತು. ಅದರ ಸಹಾಯದಿಂದ ಪರಸ್ಪರರ ಭಾಷೆ ಇನ್ನೊಬ್ಬರಿಗೆ ತಿಳಿಯುವಂತಾಯಿತು.
ನನ್ನ ಮೊದಲ ಪ್ರಶ್ನೆಯನ್ನು ಅದರ ಮುಂದಿಟ್ಟೆ.
ನಮಸ್ಕಾರ. ನೀವೆಲ್ಲ ಯಾರು? ಎಲ್ಲಿಂದ ಬರ್ತಾ ಇದ್ದಿರಿ?
"ನಮ್ಮನ್ನು ರಿಸೋರ್ಸಸ್ ಅಂದ್ರೆ ಸಂಪನ್ಮೂಲಗಳು ಅಂತ ಕರಿತಾರೆ.ನಾವು ಐ ಟಿ ಗ್ರಹದಿಂದ ಪ್ರವಾಸಾರ್ಥವಾಗಿ ಗೋಮಟೇಶ್ವರ ಬೆಟ್ಟಕ್ಕೆ ಬಂದಿದೇವೆ. ಇದನ್ನು ನಮ್ಮ ಭಾಷೆಯಲ್ಲಿ ಟೀಮ್ ಔಟಿಂಗ್ ಅಂತ ಕರಿತಾರೆ. ಇದು ಒಂದು ತಂಡದ ಸಂಪನ್ಮೂಲಗಳ ಮಧ್ಯೆ ಪರಸ್ಪರ ಭಾಂದವ್ಯ ಬೆಳೆಸಲು ಸಹಕಾರಿ ಎಂಬುವುದು ನಮ್ಮಲ್ಲಿರುವ ಒಂದು ನಂಬಿಕೆ."
ಭೂಮಿಯೂ ಸೇರಿದಂತೆ ಒಂಭತ್ತು ಗ್ರಹಗಳ ಹೆಸರುಗಳನ್ನು ವಿಜ್ಞಾನ ಪಾಠದಲ್ಲಿ ಉರು ಹೊಡೆದಿದ್ದೆ. ಆದ್ರೆ ಈ ಹೊಸ ಗ್ರಹ ಯಾವ್ದು ಅಂತ ತಿಳಿದೇ ಗಲಿಬಿಲಿಗೊಳಗಾದೆ. ಆದ್ರೂ ಆ ಗ್ರಹದ ಜೀವಿಗಳ ಬಗ್ಗೆ ಇನ್ನೂ ಹೆಚ್ಚು ತಿಳಿಯುವ ಕುತೂಹಲದಿಂದ, ಅವರ ಬಗ್ಗೆ ಇನ್ನೂ ಸ್ವಲ್ಪ ಹೇಳುವಂತೆ ಕೇಳಿದೆ.
"ನಮ್ಮಲ್ಲಿ ಮುಖ್ಯವಾಗಿ ಐಬಿಯಮರ್ಸ್, ಇನ್ಫೋಸಿಯನ್ಸ್, ವಿಪ್ರೊಟ್ಸ್ ಮುಂತಾದ ಜನಾಂಗಗಳಿವೆ. ನಾವು ಮುಖ್ಯವಾಗಿ ಸಿ, ಸಿ++, ಜಾವಾ, ಎಕ್ಶ್ ಎಂ ಎಲ್ ಮುಂತಾದ ಭಾಷೆಗಳನ್ನು ಉಪಯೋಗಿಸ್ತೇವೆ. ಇವಿಷ್ಟೇ ಅಲ್ದೆ ಇನ್ನೂ ಹತ್ತು ಹಲವು ಭಾಷೆಗಳ ಉಪಯೋಗ ಕೂಡ ಇದೆ. ಸಣ್ಣ ಪುಟ್ಟ ಜನಾಂಗಗಳೂ ಇವೆ "
ಇದೆಲ್ಲಾ ವಿಷಯಗಳು ತುಂಬಾ ವಿಚಿತ್ರವಾಗಿತ್ತು. ಒಂದು ಅಕ್ಷರವೂ ಅರ್ಥ ಆಗ್ಲಿಲ್ಲ. ಆದ್ರೂ ನಾನು ಬಿಟ್ಟು ಕೊಡಲು ತಯಾರಿಲ್ಲದೆ ಅವುಗಳ ಕೆಲಸ ಕಾರ್ಯದ ಬಗ್ಗೆ ನನ್ನ ಮುಂದಿನ ಪ್ರಶ್ನೆ ಎಸೆದೆ. ಅದು ಒಂದೊಂದೇ ವಿಷಯ ಪಟ್ಟಿ ಮಾಡುತ್ತಾ ಹೋಯ್ತು . ಅವುಗಳೆಲ್ಲವೂ ನನ್ನ ಮಟ್ಟಿಗೆ ಕಲ್ಪನಾತೀತವಾಗಿದ್ದವು.
"ಮೊದಲನೆಯದಾಗಿ ನಾವು ಎಲ್ಲ ಕಾಲದಲ್ಲೂ ಹವಾ ನಿಯಂತ್ರಿತ ಕೊಠಡಿಯ ಒಳಗೆ ಬದುಕ್ತೇವೆ. ನಾವು ಕುಡಿಯುವ ಕಾಫಿ ಚಹಾದಂತಹ ಪಾನೀಯಗಳು ಭೂಮಿಯಲ್ಲಿರುವಂತೆ ಬೆಂಕಿಯಲ್ಲಿ ತಯಾರಿಸಲ್ಪಡದೆ, ಯಂತ್ರಗಳಿಂದ ತಯಾರಿಸಲ್ಪಡುತ್ತವೆ. ನಮ್ಮಲ್ಲಿ ಕೆಲವರು ರಾತ್ರಿ ಹಗಲು ವಿಶ್ರಾಂತಿ ಇಲ್ಲದೇ ಕೆಲಸ ಮಾಡುವ ಸಾಮರ್ಥ್ಯ ಉಳ್ಳವರಾಗಿದ್ದಾರೆ. ನಮ್ಮಲ್ಲಿ ಕೆಲವರಿಗೆ ಪದೇ ಪದೇ ತಮ್ಮ ಕೆಲಸ ಬದಲಾಯಿಸುವ ಅಭ್ಯಾಸ ಇದ್ದು, ಕೆಲವರು 6
ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ತಮ್ಮ ಉದ್ಯೋಗ ಬದ್ಲಾಯಿಸ್ತಾರೆ. ಎಷ್ಟೇ ಪ್ಯಾಕೇಜ್ ಅಂದ್ರೆ ಸಂಬಳ ಸಿಕ್ಕಿದ್ರೂ ತೃಪ್ತಿ ಪಡದೆ ತಮ್ಮ ಓರಗೆಯವರೊಂದಿಗೆ ಹೋಲಿಸಿಕೊಳ್ಳುವುದು ನಮ್ಮಲ್ಲಿರುವ ಇನ್ನೊಂದು ಅತಿ ಮುಖ್ಯ ಅಭ್ಯಾಸ."
ಕನ್ನಡ, ಹಿಂದಿ, ಇಂಗ್ಲೀಷ್ ಮುಂತಾದ ಭಾಷೆಗಳನ್ನು ಕೇಳಿದ್ದ ನಂಗೆ ಅದು ಹೇಳಿದ ಭಾಷೆಗಳ ಹೆಸರು ಬಹಳ ವಿಚಿತ್ರವಾಗಿ ಕಂಡಿತು. ಅಲ್ದೆ 15 ವರ್ಷದಿಂದ ಒಂದೇ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಂದೆ, 20 ವರ್ಷದಿಂದ ಅದೇ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ನನ್ನ ಮಾಸ್ಟ್ರು ಮುಂತಾದವರನ್ನು ಕಂಡಿದ್ದ ನನಗೆ, ಅವರ ಉದ್ಯೋಗ ಬದಲಾಯಿಸುವ ಅಭ್ಯಾಸ ಕೇಳಿ ತುಂಬಾ ಆಶ್ಚರ್ಯವಾಯಿತು.
ನಾನು ಮುಂದಿನ ಪ್ರಶ್ನೆ ಕೇಳಲು ತಯಾರಾದೆ. ಆದ್ರೆ ಅದು ಮಣೆಯನ್ನು ತೆರೆದು ಅದೇನೋ ಓದ್ಲಿಕ್ಕೆ ಶುರು ಮಾಡಿತು.. ಕೂಡ್ಲೆ ಅದೆಂತದೋ ಕಸ್ಟಮರ್ ಮೈಲ್, ಪ್ರೊಜೆಕ್ಟ್, ಬಗ್ ಬಂದಿದೆ ಅಂತ ತನ್ನವರಿದ್ದ ಕಡೆಗೆ ಓಡ್ಲಿಕ್ಕೆ ಶುರು ಮಾಡಿತು. ಸ್ವಲ್ಪ ಹೊತ್ತಿನ್ ನಂತರ ತಮ್ಮ ಪ್ರವಾಸವನ್ನು ಅಲ್ಲೇ ಮೊಟಕುಗೊಳಿಸಿ ಅವರೆಲ್ಲ ವಾಪಸ್ ಹೋಗ್ತಾ ಇದ್ದಿದು ಕಂಡಿತು..
ಇನ್ನೂ ಕೇಳಬೇಕೆಂದಿದ್ದ ನನ್ನ ಎಲ್ಲ ಪ್ರಶ್ನೆಗಳು ನನ್ನಲ್ಲಿಯೆ ಉತ್ತರವಿಲ್ಲದೆ ಉಳಿದು ಬಿಟ್ಟವು.
ನನ್ನನು ಹುಡುಕುತ್ತಾ ಬಂದ ಪ್ರಶಾಂತ ನನ್ನ ಈ ಅನುಭವವನ್ನು ಕೇಳಿ ಒಳ್ಳೆಯ ಕಲ್ಪನೆಯೆಂದು ಹೊಗಳಿದ. ಎಷ್ಟೇ ಹೇಳಿದ್ರೂ ಅದು ನಿಜ ಅಂತ ನಂಬ್ಲಿಕ್ಕೆ ತಯಾರಿರಲಿಲ್ಲ. ನಾನೂ ಆ ಘಟನೆ ನಿಜವೋ ಸುಳ್ಳೋ ತಿಳೀದೆ ಬಹುಶಃ ಭ್ರಮೆ ಇರ್ಬಹುದು ಅನ್ಕೊಂಡು ಅಲ್ಲೇ ಸುಮ್ಮನಾದೆ.
ಈ ಘಟನೆಯ ಕೆಲವು ದಿನಗಳ ನಂತರ ಐ ಟಿ ಸಂಬಂದಿತ ವ್ಯವಹಾರಗಳ ಹೊರ ಗುತ್ತಿಗೆಗಾಗಿ (ಔಟ್ ಸೊರ್ಸ್)ವಿದೇಶಿ ಕಂಪನಿಗಳು ಭಾರತದತ್ತ ಮುಖ ಮಾಡಿರುದರ ಬಗ್ಗೆ ಸುದ್ದಿ ಕೇಳಿದೆ.
ಈಗ ನಾನೂ ಆ ಉದ್ಯಮದ ಭಾಗವಾಗಿ ಆಗ ಉತ್ತರವಿಲ್ಲದೇ ಉಳಿದ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ತಾ ಇದ್ದೇನೆ.
14 comments:
ಚೆನ್ನಾಗಿತ್ತು. ಆದಷ್ಟು ಜಾಸ್ತಿ ಬರೀರಿ
i was reading random blogs and i found ur blog. Interesting !
~Pradeep
ಹ ಹ ಹ.. ತುಂಬಾ ಚೆನ್ನಾಗಿದೆ ನಿಮ್ಮ ಕಲ್ಪನಾ ಲಹರಿ . :-). ಹೀಗೆ ಬರೆಯುತ್ತಾ ಇರಿ.
ನಾವು ಸಿಂಫೋನಿಸ್ ಗ್ರಹದಲ್ಲಿ ಸಿ# ಬಾಷೆಯಲ್ಲಿ ಜೀವ್ನ ಮಾಡ್ತಿದ್ದೀವಿ.
ಕಾರ್ಕಳದ ಗೊಮ್ಮಟನ ಹಿಂದೆ, ಮಂಗಳ ಪಾದೆ ನೋಡುತ್ತಾ ಕುಳಿತರೆ ಆಗುವ ವಿಶೇಷ ಅನುಭವಗಳಲ್ಲಿ ಇದೂ ಒಂದಾ? ಅದೊಂದು ಅದ್ಭುತ ಸುಂದರ ಸ್ಥಳ ಅಂತ ಗೊತ್ತು. ಅಲ್ಲಿ ಕೂತಾಗ ಮನಸ್ಸು ಯಾವುದೋ ಲೋಕಕ್ಕೆ ಹೋಗುವುದೂ ಗೊತ್ತು. ಯಾವುದೋ ಲೋಕವೇ ನಿನ್ನ ಬಳಿ ಬಂದದ್ದು ಸಂತೋಷ. ಇನ್ನೂ ಇಂಥ ಅನುಭವಗಳ ಬಗ್ಗೆ ಬರೀ...
ಸುಧಿ, ಪ್ರದೀಪ್, ರಾಜ್, ರವಿ , ಸುಪ್ತದೀಪ್ತಿ ..
ಪ್ರೋತ್ಸಾಹದ ನುಡಿಗಳನ್ನಾಡಿದ ಎಲ್ಲರಿಗೂ ಧನ್ಯವಾದಗಳು .
ಸಕ್ಕತ್ ಆಗಿ imagination ಮಾಡಿ ಬರ್ಧಿದ್ದೀರಾ, ಆದ್ರೆ ನಂಗೆ ಮಾತ್ರ ಕಡಲೆ ತರಲು ಕೆಲಗಡೆ ಕಳಿಸಿರುವುದು ತುಂಬಾ ಬೇಜಾರಿನ ವಿಷಯ.
ನಾನು ಆ ದಿನ ನಂಬಿಲ್ಲ ವದರೂ, ಈಗಿನ ಪರಿಸ್ತಿತಿಗಾನುಸಾರವಾಗಿ ನಂಬಿದ್ದೇನೆ.
ಇನ್ನೂ ಎಚ್ಛಿನ "BLOG " ಗೆ ಎದುರು ನೋಡುತ್ತಿದ್ದೇವೆ
"keep it up"
ಈಗೊಂದಿಷ್ಟು ಕಾಲೆಳೀಲಾ?
೧) ಚಿತ್ರ ನಮ್ಮ ಕಾರ್ಕಳದ ಗೊಮ್ಮಟಬೆಟ್ಟದ್ದಲ್ಲವೇ ಅಲ್ಲ.
೨) ಒಂದು ವೇಳೆ ಅದೇ ಆಗಿದ್ದರೂ... ಹಾರುವ ತಟ್ಟೆ ಹತ್ತಿರ ಬರುವಾಗಲೇ ನಿನ್ನ ಕೈಯಲ್ಲಿ ಕ್ಯಾಮೆರಾ ರೆಡಿಯಾಗಿತ್ತ?
೩) ತಟ್ಟೆಯ ಚಿತ್ರ ತೆಗೆದವನಿಗೆ ಅದರಿಂದಿಳಿದ ಜೀವಿಗಳನ್ನು ಚಿತ್ರದಲ್ಲಿ ಸೆರೆಹಿಡಿಯೋದು ಮರೆತು ಹೋಯ್ತಾ?
೪) ಅದೇ ಉದ್ಯಮದಲ್ಲೀಗ ಭಾಗಿಯಾದ ನೀನು ಅವರುಗಳಂತೆಯೇ ಹಾರುವ ತಟ್ಟೆಯಲ್ಲಿ ಹಾರುತ್ತಿರುತ್ತೀಯ?
ಸದ್ಯಕ್ಕೆ ಇಷ್ಟು ಪ್ರಶ್ನೆ ಸಾಕು...!
nimma uLida prashnegaLige uttar tiLididdare bega tiLasi :)-...
matte hege naDita ide bug fixing :)- ?
@ಸುಪ್ತದೀಪ್ತಿ ..
ಎಷ್ಟು ಜೋರಾಗಿ ಕಾಲು ಎಳಿತಾ ಇದ್ದೀರಿ? ಒಂದು ಸಲ ಕೆಳಗೆ ಬಿದ್ದೆ..ಈಗ ಎದ್ದು ಉತ್ತರ ಬರೀತ ಇದ್ದೇನೆ.
1. ಚಿತ್ರ ನಮ್ಮ ಕಾರ್ಕಳದ ಗೊಮ್ಮಟಬೆಟ್ಟದೆ.30 ವರ್ಷದ ಹಿಂದೆ ಬೆಟ್ಟದ ಹಿಂಬಾಗ ಹೀಗೆ ಇತ್ತು
2. ಹಾವ್ದು.. ಹಾರುವ ತಟ್ಟೆ ಹತ್ತಿರ ಬರುವಾಗಲೇ ನನ್ನ ಕೈಯಲ್ಲಿ ಕ್ಯಾಮೆರಾ ರೆಡಿಯಾಗಿತು.
3.ಕ್ಯಾಮೆರಾದಲ್ಲಿ ಒಂದೇ ರೀಳು ಇತ್ತು !!!
4. ಆದ್ರೆ ನಾನು ಈಗ ಇದೆ ಗ್ರಹದಲ್ಲಿ ಇದ್ದೇನೆ.. ಹಾಗಾಗಿ ಹಾರುವ ತಟ್ಟೆಯ ಅವಶ್ಯಕತೆ ಇಲ್ಲ..
"ಚಿತ್ರ ನಮ್ಮ ಕಾರ್ಕಳದ ಗೊಮ್ಮಟಬೆಟ್ಟದೆ. 30 ವರ್ಷದ ಹಿಂದೆ ಬೆಟ್ಟದ ಹಿಂಬಾಗ ಹೀಗೆ ಇತ್ತು "-- ಓಹೋ, ಹಾಗಾದ್ರೆ ಇದು ನಿನಗೆ ಎರಡನೇ ಜನ್ಮ... ಸರಿ. ನನ್ನ ಲೆಕ್ಕಾಚಾರ ಸರಿಯೇ ಇದೆ.
ನಿಮ್ಮ ಬ್ಲಾಗ್ ಚೆನ್ನಾಗಿದೆ ಮತ್ತೊಮ್ಮೆ ಬರಬೇಕೆಂದಿದ್ದೇನೆ. ಮತ್ತೆ ಮತ್ತೆ ಬರೆಯುತ್ತಿರಿ.
ಲಹರಿ ಉತ್ತಮವಾಗಿವೆ.
ಮಳೆ-ಬೆಳೆ ಹೇಗೆ ನಿಮ್ಮ ಗ್ರಹದಲ್ಲಿ?
Vijendra Rayare.. Thumba chennagi nimma kalpane yanna vyaktha padisiddira.. Heege Naija kalpane gala bagge baritha eri.
Post a Comment