"ಭಾರ್ಗವಿ" ನೃತ್ಯ ತಂಡದ ಬಗ್ಗೆ ....
ಮೊನ್ನೆ ಶನಿವಾರ ಸೋನಿ ಟಿವಿಯಲ್ಲಿ ಪುನರ್ ಪ್ರಸಾರವಾಗುತಿದ್ದ ಭೂಗಿ ವೂಗಿ ನೃತ್ಯ ಕಾರ್ಯಕ್ರಮ ನೋಡುತ್ತಾ ಇದ್ದೆ. ದೇಶದ ಮೂಲೆ ಮೂಲೆಗಳಿಂದ ಬರುವ ಸ್ಪರ್ಧಿಗಳ ನಡುವೆ ಆರರಿಂದ ಅರವತ್ತು ವರ್ಷಗಳವರೆಗಿನ ವಿವಿಧ ವಿಭಾಗಗಳಲ್ಲಿ ಜಿದ್ದಾ ಜಿದ್ದಿನ ಸ್ಪರ್ಧೆ ಈ ವೇದಿಕೆಯ ಮೇಲೆ ಕಾಣಲು ಸಿಗುತ್ತದೆ. ಸ್ವತ: ಉತ್ತಮ ನೃತ್ಯ ಪಟು ಮತ್ತು ನಟರಾದ ಜಾವೆದ್ ಜಾಫ್ರಿಯವರು ತಮ್ಮ ಸಹೋದರರೊಂದಿಗೆ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ತಮ್ಮ ಲವಲವಿಕೆಯ ಮಾತುಗಳಿಂದ, ಹಾಸ್ಯಗಳಿಂದ ಕಾರ್ಯಕ್ರಮದ ಯಶಸ್ಸಿಗೆ ಇವರದ್ದೂ ಸಿಂಹ ಪಾಲಿದೆ.
ಆ ದಿನದ ಕಾರ್ಯಕ್ರಮದಲ್ಲಿ ಒಂದು ಸುಂದರ ನೃತ್ಯದ ಬಳಿಕ, ಕಾರ್ಯಕ್ರಮ ನಿರೂಪಕರಾದ ಜಾವೆದ್ ಜಾಫ್ರಿಯವರು ಮುಂದಿನ ತಂಡ ಕರ್ನಾಟಕದ ಉಡುಪಿಯಿಂದ ಬಂದಿದ್ದಾರೆ ಎಂದು ಘೋಷಿಸಿದಾಗ, ರೋಮಾಂಚನದ ಜೊತೆಗೆ ಏನೋ ಪುಳಕ, ನಮ್ಮ ಊರಿನ ತಂಡ ಎಂಬ ಹೆಮ್ಮೆ. ಎಲ್ಲರನ್ನೂ ಕರೆದು ಟಿವಿ ಮುಂದೆ ಕೂರಿಸಿದೆ.
ಬಣ್ಣ ಬಣ್ಣದ ನವಿಲಿನ ವೇಷ ಭೂಷಣ ತೊಟ್ಟ 6 -7 ಮಕ್ಕಳನ್ನೊಳಗೊಂಡ ತಂಡ ವೇದಿಕೆಯ ಮೇಲೆ ಬಂತು. ತಮ್ಮ ನೃತ್ಯಕ್ಕಾಗಿ ಎಲ್ಲರಂತೆ ಪ್ರಸಿದ್ದ ಹಿಂದಿ ಚಲನ ಚಿತ್ರಗಳ ಹಾಡನ್ನು ಆರಿಸಿಕೊಳ್ಳದೆ ಪ್ರವೀಣ್ ಗೋಡ್ಕಿಂಡಿಯವರ ರಾಗ್ ರಂಗ್ ಧ್ವನಿ ಸುರುಳಿಯ ಒಂದು ಅದ್ಭುತ ರಾಗವನ್ನು ಆರಿಸಿಕೊಂಡಿದ್ದರು.ಇನ್ನು ಅವರ ನೃತ್ಯದ ಬಗ್ಗೆಯಂತೂ ಎರಡು ಮಾತಿಲ್ಲ, ಒಂದು ಹೊಸ ತರಹದ ಪ್ರಯತ್ನದಲ್ಲಿ ಜಿಮ್ನ್ಯಾಸ್ಟಿಕ್ ಬಾಲೆಯರನ್ನೂ ಮೀರಿಸುವಂತೆ ದೇಹದಲ್ಲಿ ಎಲುಬು ಇಲ್ಲವೇನೋ ಎಂದು ಸಂಶಯ ಬರುವಂತಹ ಒಂದು ವಿಶಿಷ್ಟ ಅತ್ಯದ್ಭುತ ನೃತ್ಯ ಪ್ರದರ್ಶನ ನೀಡಿದರು.
ಕೊನೆಗೆ ನಿರೀಕ್ಷಿಸಿದಂತೆ ಅವರ "ಭಾರ್ಗವಿ" ತಂಡಕ್ಕೆ ಬಹುಮಾನವೂ ಬಂತು. ಬರದೇ ಇರಲು ಸಾಧ್ಯವೂ ಇರಲಿಲ್ಲ !. ತಮ್ಮ ಪ್ರದರ್ಶನದ ಬಳಿಕ ನಿರೂಪಕರು ಕೇಳಿದ ಪ್ರಶ್ನೆಗಳಿಗೆಲ್ಲ ಹಿಂದಿ ಭಾಷೆ ಬಾರದ ಕಾರಣ ಇಂಗ್ಲಿಷ್ನಲ್ಲೇ ಉತ್ತರಿಸ ತೊಡಗಿದರು. ಕೊನೆಗೆ ಬಹುಮಾನಗಳ ಘೋಷಣೆಯಾದ ಬಳಿಕ, ಈ ಸ್ಪರ್ಧೆಯ ಬಗ್ಗೆ, ತಮಗೆ ಬಹುಮಾನ ಬಂದ ಬಗ್ಗೆ ಎರಡು ಮಾತುಗಳನ್ನಾದಲು ಅವಕಾಶ ಕೊಟ್ಟಾಗ, ಅವರೊಲ್ಲೊಬ್ಬಳು ಹುಡುಗಿ "I will tell this in my mother toungue Kannada" ಎಂದು ಹೇಳಿದ ಮಾತುಗಳನ್ನು ಇಲ್ಲಿ ಹಿಡಿದಿಡಲು ಪ್ರಯತ್ನಿಸುತ್ತೇನೆ. "ನಮಗೆ ಪ್ರೋತ್ಸಾಹ ನೀಡಿದ ಕರ್ನಾಟಕದ ಕನ್ನಡದ ಎಲ್ಲ ಜನರಿಗೂ ನಮ್ಮ ಧನ್ಯವಾದಗಳು, ಮತ್ತು ನಮ್ಮ ಅಜ್ಜಿ ಮಲ್ಲಮ್ಮ ಅವರಿಗೂ ನಮ್ಮ ಧನ್ಯವಾದಗಳು, ಹೀಗೆ ಎಲ್ಲರ ಪ್ರೋತ್ಸಾಹ ನಮ್ಮ ಮೇಲಿರಲಿ". ಅವಳು ಈ ಮಾತುಗಳನ್ನು ಹೇಳಿ ಮುಗಿಸಿದಾಗ ವಾಹ್ ವಾಹ್ ! ಎಂಬ ಉದ್ಗಾರದೊಂದಿಗೆ ಜಾವೆದ್ ಅವರಿಂದ ಮೊದಲ್ಗೊಂಡು ಅಲ್ಲಿ ನೆರೆದಿದ್ದ ಪ್ರೇಕ್ಷಕರಿಂದ ಕರತಾಡನಾಯಿತು. ಕನ್ನಡ ಚಾನೆಲ್ಗಳಲ್ಲಿ ನಡೆಯುವ ಅಪ್ಪಟ ಕನ್ನಡ ಕಾರ್ಯಕ್ರಮಗಳಲ್ಲೇ ಇಂಗ್ಲಿಷ್ನಲ್ಲಿ ಮಾತನಾಡುವ ಜನರ ನಡುವೆ, ನಿಜವಾಗಿಯೂ ಆ ಮಕ್ಕಳ ಮತ್ತು ಅವರ ಹೆತ್ತವರ ಕನ್ನಡದ ಬಗೆಗಿನ ಅಭಿಮಾನ ಕಂಡು ತುಂಬಾ ಸಂತೋಷವಾಯ್ತು. ನಿಜವಾಗಿಯೂ ನನ್ನ ಸ್ವಂತ ಸಹೋದರಿಯರೇ ಬಹುಮಾನ ಗೆದ್ದಷ್ಟೇ ಹೆಮ್ಮೆ,ಸಂತೋಷವಾಯ್ತು.
"ಭಾರ್ಗವಿ" ತಂಡಕ್ಕೆ ನನ್ನ ಅಭಿನಂದನೆಗಳು, ಈ ತಂಡವು ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡಲಿ, ದೇಶ ವಿದೇಶಗಳಲ್ಲಿ ಪ್ರಖ್ಯಾತವಾಗಲಿ ಎಂಬ ಪ್ರೀತಿಯ ಹಾರೈಕೆ.