Friday, April 20, 2007

ಐ ಟಿ ಗ್ರಹದ ಜೀವಿಗಳು



ನಾನೀಗ ನಿಮಗೆ ಹೇಳಲಿರುವ ವಿಷಯ ಸುಮಾರು 25 ವರ್ಷಗಳ ಹಿಂದೆ ನಡೆದಿದ್ದರೂ, ನಿನ್ನೆ ಮೊನ್ನೆ ನಡೆದಂತೆ ನನ್ನ ಮನಸಿನಲ್ಲಿ ಹಚ್ಚ ಹಸುರಾಗಿದೆ. ಸುಮಾರು ಮುಸ್ಸಂಜೆಯ ಹೊತ್ತು, ಪ್ರಶಾಂತ ಹಾಗೂ ನಾನು ಕಾರ್ಕಳದ ಗೋಮಟೇಶ್ವರ ಬೆಟ್ಟಕ್ಕೆ ತಿರುಗಾಟಕ್ಕೆ ಹೋಗಿದ್ದೆವು. ಬೆಟ್ಟದ ಮೇಲೆ ತಿನ್ನಲು ಕಡಲೆ ತರಲೆಂದು ಪ್ರಶಾಂತ ಕೆಳಗೆ ಹೋಗಿದ್ದ. ನಾನು ಗೋಮಟೇಶ್ವರ ಬೆಟ್ಟದ ನೆತ್ತಿಯ ಮೇಲೆ ಮುಂದೆ ನಡೆಯದಬಹುದಾದ ಅದ್ಭುತದ ಬಗ್ಗೆ ಎಳ್ಳಷ್ಟೂ ಸುಳಿವು ಇಲ್ಲದೆ, ಆ ಅಗಾಧ ಮೂರ್ತಿಯ ಹಿಂದೆ ಮಂಗಳಪಾದೆಯನ್ನು ನೋಡುತ್ತಾ ನಿಂತಿದ್ದೆ. ಆಶ್ಚರ್ಯ! ಆ ನೀಲ ಆಕಾಶದಲ್ಲಿ ದೂರದಿಂದ ಬೆಳ್ಳಿ ಚುಕ್ಕೆಯೊಂದು ನನ್ನ ಕಡೆಗೆ ಬರತೊಡಗಿತು. ಚುಕ್ಕೆಯಂತೆ ಭಾಸವಾಗುತ್ತಿದ್ದ ಅದು ಹತ್ತಿರ ಬಂದಂತೆಲ್ಲಾ ತಟ್ಟೆಯಾಕಾರದ ತಳೆದು ತನ್ನ ಕಡ್ಡಿಯಂತಹ ನಾಲ್ಕು ಕಾಲಿನ ಮೇಲೆ ಗೋಮಟೇಶ್ವರ ವಿಗ್ರಹದ ಹಿಂದೆ ವಿಶಾಲವಾದ ಖಾಲಿ ಜಾಗದಲ್ಲಿ ನಿಲುಗಡೆಯಾಯ್ತು. ಭ್ರಮೆಯೋ ಏನೋ ಎಂದುಕೊಳ್ಳುತ್ತಾ ನೋಡ ನೋಡುತ್ತಿದ್ದಂತೆ ಆ ತಟ್ಟೆಯಾಕಾರದ ವಾಹನದಿಂದ 8 -10 ಜನ ಮಾನವನಂತೆಯೇ ಕಾಣುತ್ತಿದ್ದ ಜೀವಿಗಳು ಹೊರಗಿಳಿಯತೊಡಗಿದವು. ಮಾಲೆಯಂತೆ ಧರಿಸಿದ್ದ ಗುರುತು ಚೀಟಿಯಿಂದ ಅವರೆಲ್ಲರ ಕೊರಳು ಅಲಂಕರಿಸಲ್ಪಟ್ತಿತ್ತು. ಇದನ್ನೆಲ್ಲ ನೋಡುತ್ತಾ ಆಶ್ಚರ್ಯದಿಂದ ನಿಂತಿದ್ದೆ.ಅವುಗಳಲ್ಲೊಂದು ಜೀವಿ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರವಾಗಲೋ ಎಂಬಂತೆ ನಾನಿದ್ದ ಕಡೆ ನಿಧಾನವಾಗಿ ನಡೆಯುತ್ತಾ ಬಂದಿತು.ಅವರ ಬಗ್ಗೆ ತಿಳಿಯುವ ಕುತೂಹಲದಿಂದ ಅದನ್ನು ಮಾತನಾಡಿಸುವ ನಿರ್ಧಾರ ಮಾಡಿದೆ.
ನನ್ನ ಭಾಷೆ ಅದಕ್ಕೆ ತಿಳಿಯುತ್ತೋ ಇಲ್ಲವೋ ಎಂಬ ಸಂಶಯದಲ್ಲಿ ಮಾತನಾಡಲು ತಡವರಿಸುತ್ತಿದ್ದೆ. ಅಷ್ಟರಲ್ಲಿ ಅದು ತನ್ನಲ್ಲಿದ್ದ ಮಣೆಯಂತಹ ವಸ್ತುವನ್ನು ತೆರೆದು ಅದರಲ್ಲಿದ್ದ ಗುಂಡಿಯನ್ನು ಒತ್ತತೊಡಗಿತು. ಸ್ವಲ್ಪ ಸಮಯದ ನಂತರ ಅದೇ ಹೇಳಿದಂತೆ ಅದೇನೋ ಇಂಟರ್ಪ್ರಿಟರ್ ತನ್ನ ಕಾರ್ಯರಾಂಭ ಮಾಡಿತು. ಅದರ ಸಹಾಯದಿಂದ ಪರಸ್ಪರರ ಭಾಷೆ ಇನ್ನೊಬ್ಬರಿಗೆ ತಿಳಿಯುವಂತಾಯಿತು.

ನನ್ನ ಮೊದಲ ಪ್ರಶ್ನೆಯನ್ನು ಅದರ ಮುಂದಿಟ್ಟೆ.

ನಮಸ್ಕಾರ. ನೀವೆಲ್ಲ ಯಾರು? ಎಲ್ಲಿಂದ ಬರ್ತಾ ಇದ್ದಿರಿ?

"ನಮ್ಮನ್ನು ರಿಸೋರ್ಸಸ್ ಅಂದ್ರೆ ಸಂಪನ್ಮೂಲಗಳು ಅಂತ ಕರಿತಾರೆ.ನಾವು ಐ ಟಿ ಗ್ರಹದಿಂದ ಪ್ರವಾಸಾರ್ಥವಾಗಿ ಗೋಮಟೇಶ್ವರ ಬೆಟ್ಟಕ್ಕೆ ಬಂದಿದೇವೆ. ಇದನ್ನು ನಮ್ಮ ಭಾಷೆಯಲ್ಲಿ ಟೀಮ್ ಔಟಿಂಗ್ ಅಂತ ಕರಿತಾರೆ. ಇದು ಒಂದು ತಂಡದ ಸಂಪನ್ಮೂಲಗಳ ಮಧ್ಯೆ ಪರಸ್ಪರ ಭಾಂದವ್ಯ ಬೆಳೆಸಲು ಸಹಕಾರಿ ಎಂಬುವುದು ನಮ್ಮಲ್ಲಿರುವ ಒಂದು ನಂಬಿಕೆ."

ಭೂಮಿಯೂ ಸೇರಿದಂತೆ ಒಂಭತ್ತು ಗ್ರಹಗಳ ಹೆಸರುಗಳನ್ನು ವಿಜ್ಞಾನ ಪಾಠದಲ್ಲಿ ಉರು ಹೊಡೆದಿದ್ದೆ. ಆದ್ರೆ ಈ ಹೊಸ ಗ್ರಹ ಯಾವ್ದು ಅಂತ ತಿಳಿದೇ ಗಲಿಬಿಲಿಗೊಳಗಾದೆ. ಆದ್ರೂ ಆ ಗ್ರಹದ ಜೀವಿಗಳ ಬಗ್ಗೆ ಇನ್ನೂ ಹೆಚ್ಚು ತಿಳಿಯುವ ಕುತೂಹಲದಿಂದ, ಅವರ ಬಗ್ಗೆ ಇನ್ನೂ ಸ್ವಲ್ಪ ಹೇಳುವಂತೆ ಕೇಳಿದೆ.

"ನಮ್ಮಲ್ಲಿ ಮುಖ್ಯವಾಗಿ ಐಬಿಯಮರ್ಸ್, ಇನ್ಫೋಸಿಯನ್ಸ್, ವಿಪ್ರೊಟ್ಸ್ ಮುಂತಾದ ಜನಾಂಗಗಳಿವೆ. ನಾವು ಮುಖ್ಯವಾಗಿ ಸಿ, ಸಿ++, ಜಾವಾ, ಎಕ್ಶ್ ಎಂ ಎಲ್ ಮುಂತಾದ ಭಾಷೆಗಳನ್ನು ಉಪಯೋಗಿಸ್ತೇವೆ. ಇವಿಷ್ಟೇ ಅಲ್ದೆ ಇನ್ನೂ ಹತ್ತು ಹಲವು ಭಾಷೆಗಳ ಉಪಯೋಗ ಕೂಡ ಇದೆ. ಸಣ್ಣ ಪುಟ್ಟ ಜನಾಂಗಗಳೂ ಇವೆ "

ಇದೆಲ್ಲಾ ವಿಷಯಗಳು ತುಂಬಾ ವಿಚಿತ್ರವಾಗಿತ್ತು. ಒಂದು ಅಕ್ಷರವೂ ಅರ್ಥ ಆಗ್ಲಿಲ್ಲ. ಆದ್ರೂ ನಾನು ಬಿಟ್ಟು ಕೊಡಲು ತಯಾರಿಲ್ಲದೆ ಅವುಗಳ ಕೆಲಸ ಕಾರ್ಯದ ಬಗ್ಗೆ ನನ್ನ ಮುಂದಿನ ಪ್ರಶ್ನೆ ಎಸೆದೆ. ಅದು ಒಂದೊಂದೇ ವಿಷಯ ಪಟ್ಟಿ ಮಾಡುತ್ತಾ ಹೋಯ್ತು . ಅವುಗಳೆಲ್ಲವೂ ನನ್ನ ಮಟ್ಟಿಗೆ ಕಲ್ಪನಾತೀತವಾಗಿದ್ದವು.

"ಮೊದಲನೆಯದಾಗಿ ನಾವು ಎಲ್ಲ ಕಾಲದಲ್ಲೂ ಹವಾ ನಿಯಂತ್ರಿತ ಕೊಠಡಿಯ ಒಳಗೆ ಬದುಕ್ತೇವೆ. ನಾವು ಕುಡಿಯುವ ಕಾಫಿ ಚಹಾದಂತಹ ಪಾನೀಯಗಳು ಭೂಮಿಯಲ್ಲಿರುವಂತೆ ಬೆಂಕಿಯಲ್ಲಿ ತಯಾರಿಸಲ್ಪಡದೆ, ಯಂತ್ರಗಳಿಂದ ತಯಾರಿಸಲ್ಪಡುತ್ತವೆ. ನಮ್ಮಲ್ಲಿ ಕೆಲವರು ರಾತ್ರಿ ಹಗಲು ವಿಶ್ರಾಂತಿ ಇಲ್ಲದೇ ಕೆಲಸ ಮಾಡುವ ಸಾಮರ್ಥ್ಯ ಉಳ್ಳವರಾಗಿದ್ದಾರೆ. ನಮ್ಮಲ್ಲಿ ಕೆಲವರಿಗೆ ಪದೇ ಪದೇ ತಮ್ಮ ಕೆಲಸ ಬದಲಾಯಿಸುವ ಅಭ್ಯಾಸ ಇದ್ದು, ಕೆಲವರು 6
ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ತಮ್ಮ ಉದ್ಯೋಗ ಬದ್ಲಾಯಿಸ್ತಾರೆ. ಎಷ್ಟೇ ಪ್ಯಾಕೇಜ್ ಅಂದ್ರೆ ಸಂಬಳ ಸಿಕ್ಕಿದ್ರೂ ತೃಪ್ತಿ ಪಡದೆ ತಮ್ಮ ಓರಗೆಯವರೊಂದಿಗೆ ಹೋಲಿಸಿಕೊಳ್ಳುವುದು ನಮ್ಮಲ್ಲಿರುವ ಇನ್ನೊಂದು ಅತಿ ಮುಖ್ಯ ಅಭ್ಯಾಸ."

ಕನ್ನಡ, ಹಿಂದಿ, ಇಂಗ್ಲೀಷ್ ಮುಂತಾದ ಭಾಷೆಗಳನ್ನು ಕೇಳಿದ್ದ ನಂಗೆ ಅದು ಹೇಳಿದ ಭಾಷೆಗಳ ಹೆಸರು ಬಹಳ ವಿಚಿತ್ರವಾಗಿ ಕಂಡಿತು. ಅಲ್ದೆ 15 ವರ್ಷದಿಂದ ಒಂದೇ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಂದೆ, 20 ವರ್ಷದಿಂದ ಅದೇ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ನನ್ನ ಮಾಸ್ಟ್ರು ಮುಂತಾದವರನ್ನು ಕಂಡಿದ್ದ ನನಗೆ, ಅವರ ಉದ್ಯೋಗ ಬದಲಾಯಿಸುವ ಅಭ್ಯಾಸ ಕೇಳಿ ತುಂಬಾ ಆಶ್ಚರ್ಯವಾಯಿತು.

ನಾನು ಮುಂದಿನ ಪ್ರಶ್ನೆ ಕೇಳಲು ತಯಾರಾದೆ. ಆದ್ರೆ ಅದು ಮಣೆಯನ್ನು ತೆರೆದು ಅದೇನೋ ಓದ್ಲಿಕ್ಕೆ ಶುರು ಮಾಡಿತು.. ಕೂಡ್ಲೆ ಅದೆಂತದೋ ಕಸ್ಟಮರ್ ಮೈಲ್, ಪ್ರೊಜೆಕ್ಟ್, ಬಗ್ ಬಂದಿದೆ ಅಂತ ತನ್ನವರಿದ್ದ ಕಡೆಗೆ ಓಡ್ಲಿಕ್ಕೆ ಶುರು ಮಾಡಿತು. ಸ್ವಲ್ಪ ಹೊತ್ತಿನ್ ನಂತರ ತಮ್ಮ ಪ್ರವಾಸವನ್ನು ಅಲ್ಲೇ ಮೊಟಕುಗೊಳಿಸಿ ಅವರೆಲ್ಲ ವಾಪಸ್ ಹೋಗ್ತಾ ಇದ್ದಿದು ಕಂಡಿತು..

ಇನ್ನೂ ಕೇಳಬೇಕೆಂದಿದ್ದ ನನ್ನ ಎಲ್ಲ ಪ್ರಶ್ನೆಗಳು ನನ್ನಲ್ಲಿಯೆ ಉತ್ತರವಿಲ್ಲದೆ ಉಳಿದು ಬಿಟ್ಟವು.

ನನ್ನನು ಹುಡುಕುತ್ತಾ ಬಂದ ಪ್ರಶಾಂತ ನನ್ನ ಈ ಅನುಭವವನ್ನು ಕೇಳಿ ಒಳ್ಳೆಯ ಕಲ್ಪನೆಯೆಂದು ಹೊಗಳಿದ. ಎಷ್ಟೇ ಹೇಳಿದ್ರೂ ಅದು ನಿಜ ಅಂತ ನಂಬ್ಲಿಕ್ಕೆ ತಯಾರಿರಲಿಲ್ಲ. ನಾನೂ ಆ ಘಟನೆ ನಿಜವೋ ಸುಳ್ಳೋ ತಿಳೀದೆ ಬಹುಶಃ ಭ್ರಮೆ ಇರ್ಬಹುದು ಅನ್ಕೊಂಡು ಅಲ್ಲೇ ಸುಮ್ಮನಾದೆ.

ಈ ಘಟನೆಯ ಕೆಲವು ದಿನಗಳ ನಂತರ ಐ ಟಿ ಸಂಬಂದಿತ ವ್ಯವಹಾರಗಳ ಹೊರ ಗುತ್ತಿಗೆಗಾಗಿ (ಔಟ್ ಸೊರ್ಸ್)ವಿದೇಶಿ ಕಂಪನಿಗಳು ಭಾರತದತ್ತ ಮುಖ ಮಾಡಿರುದರ ಬಗ್ಗೆ ಸುದ್ದಿ ಕೇಳಿದೆ.

ಈಗ ನಾನೂ ಆ ಉದ್ಯಮದ ಭಾಗವಾಗಿ ಆಗ ಉತ್ತರವಿಲ್ಲದೇ ಉಳಿದ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ತಾ ಇದ್ದೇನೆ.